ಕಿಂಗ್ಸ್‍ಲಿ, ಚಾಲ್ರ್ಸ್

 1819-1875. ಆಂಗ್ಲ ಕಾದಂಬರಿಕಾರ, ಇತಿಹಾಸಕಾರ, ಧರ್ಮಗುರು, ಪಾದ್ರಿಯೊಬ್ಬನ ಮಗನಾದ ಈತ ಡಾರ್ಟ್‍ಮೂರಿನ ಬಳಿ ಸಣ್ಣ ಗ್ರಾಮ ಒಂದರಲ್ಲಿ ಹುಟ್ಟಿದ. ಬಾಲ್ಯವನ್ನು ಬಾನ್ರ್ಯಾಕ್‍ನಲ್ಲೂ ಡೆವಾನ್‍ಫೈರಿನ ಕೊವೆಲ್ಲಿಯಲ್ಲೂ ಕಳೆದ. ತನ್ನ ನಾಲ್ಕನೆಯ ವರ್ಷದಲ್ಲಿಯೇ ಉಪದೇಶ ಭಾಷಣಗಳನ್ನು ಬರೆಯುತ್ತಿದ್ದನೆಂದು ಹೇಳಲಾಗಿದೆ. ವಿದ್ಯಾಭ್ಯಾಸ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲೂ ಕೇಂಬ್ರಿeóïನ ಮ್ಯಾಗ್ಡಲೀನ್ ಕಾಲೇಜಿನಲ್ಲೂ ನಡೆಯಿತು. ಮುಂದೆ ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಬೇಕೆಂಬ ಅಭಿಲಾಷೆಯಿತ್ತು. ಅದು ಕೈಗೂಡದೆ 1842ರಲ್ಲಿ ಪಾದ್ರಿಯ ಸಹಾಯಕನಾಗಿ ಎರಡು ವರ್ಷಗಳ ಕಾಲ ಕೆಲಸಮಾಡಿದ. ಅನಂತರ ಹ್ಯಾರಿಸ್‍ಷೈರಿನ ಎವರ್‍ಸ್ಲೆಯಲ್ಲಿ ಪಾದ್ರಿಯಾದ ಮುಂದಿನ ವರ್ಷ ದಿ ಸೇಂಟ್ಸ್ ಟ್ರಾಜಡಿ ಎಂಬ ನಾಟಕವನ್ನು ಪ್ರಕಟಿಸಿದ. ಹಂಗೇರಿಯ ಸೇಂಟ್ ಎಲಿಜûಬೆತಳೇ ಅದರ ನಾಯಕಿ. ಯೀಸ್ಟ್ (1848) ಮತ್ತು ಆಲ್ಟನ್‍ಲಾಕ್ (1850) ಎಂಬ ಕಾದಂಬರಿಗಳಲ್ಲಿ ಕಾರ್ಮಿಕ ಹಾಗೂ ರೈತಾಪಿ ವರ್ಗದವರ ಸಾಮಾಜಿಕ ಸಮಸ್ಯೆಗಳನ್ನು ವರ್ಣಿಸಲಾಗಿದೆ. 1853ರಲ್ಲಿ ಪ್ರಕಟವಾದ ಹೈಪೇಷ ಗ್ರಂಥದಲ್ಲಿ ಅಲೆಕ್ಸಾಂಡ್ರಿಯದ ಗ್ರೀಕ್ ತತ್ತ್ವಜ್ಞರಿಗೂ ಪ್ರಾಚೀನ ಕ್ರೈಸ್ತಮತಾವಲಂಬಿಗಳಿಗೂ ಇದ್ದ ಭಿನ್ನಾಭಿಪ್ರಾಯಗಳನ್ನು ತೋರಿಸಲಾಗಿದೆ. ಹೈಪೇಷ ಅಲೆಕ್ಸಾಂಡ್ರಿಯದಲ್ಲಿ 5ನೆಯ ಶತಮಾನದಲ್ಲಿದ್ದ ಒಬ್ಬ ವೇದಾಂತಿ. ಆಕೆಯನ್ನು ಕ್ರೈಸ್ತ ಸನ್ಯಾಸಿಗಳು ಹಿಂಸಿಸಿ ಕೊಲ್ಲುತ್ತಾರೆ. ಸಾಧಾರಣ ಜನರಿಗೆ ವಿದ್ಯಾವತಿಯರನ್ನು ಕಂಡರೆ ಇರುವ ಅಸಹನೆಯನ್ನು ಈ ಪುಸ್ತಕ ಎತ್ತಿ ತೋರಿಸಿದೆ. ಮುಂದೆ ಪ್ರಕಟವಾದ ವೆಸ್ಟ್‍ವರ್ಡ್ ಹೋ ಎಂಬ ಗ್ರಂಥದಲ್ಲಿ ಇದೇ ಸಮಸ್ಯೆಗಳಿದ್ದು ಆ ಪುಸ್ತಕ ತುಂಬ ಜನಪ್ರಿಯತೆ ಗಳಿಸಿತು. ದಿ ವಾಟರ್ ಬೇಬೀಸ್ (1863) ಎಂಬುದು ಮಕ್ಕಳಿಗಾಗಿ ಬರೆದ ಪುಸ್ತಕ. ಇದರಲ್ಲಿ ಪ್ರಕೃತಿವೈಚಿತ್ರ್ಯದತ್ತ ಮಕ್ಕಳ ಕುತೂಹಲವನ್ನು ಕೆರಳಿಸಲಾಗಿದೆ. ದಿ ತ್ರೀ ಫಿಷರ್ಸ್, ಎ ಫೇರ್‍ವೆಲ್, ಯಂಗ್ ಅಂಡ್ ಓಲ್ಡ್-ಇವು ಈತನ ಕವನಗಳಲ್ಲಿ ಮುಖ್ಯವಾದವು. 1859ರಲ್ಲಿ ಕಿಂಗ್ಸ್‍ಲಿ ವಿಕ್ಟೋರಿಯ ರಾಣಿಯ ಅರಮನೆಯ ಬಿಷಪ್ ಆಗಿದ್ದ. 1860-69ರ ವರೆಗೆ ಕೇಂಬ್ರಿeóïನಲ್ಲಿ ಆಧುನಿಕ ಇತಿಹಾಸದ ಪ್ರಾಧ್ಯಾಪಕನಾಗಿದ್ದ. 1875ರಲ್ಲಿ ತೀರಿಕೊಂಡ. 1872ರಲ್ಲಿ ಈತನ ಆಯ್ದ ಕವನ ಸಂಕಲನವೊಂದು ಪ್ರಕಟವಾಯಿತು. 1877ರಲ್ಲಿ ಈತನ ಹೆಂಡತಿ ಪತಿಯ ಪತ್ರಗಳನ್ನು ಪ್ರಕಟಿಸಿದಳು. ಉದ್ವೇಗಪೂರ್ಣವಾದ ಸ್ವಭಾವದವನಾದರೂ ತನ್ನ ಇತರ ಉದಾರಗುಣಗಳಿಂದಾಗಿ ಕಿಂಗ್ಸ್‍ಲಿ ಜನರ ಮೆಚ್ಚಿಕೆಗೆ ಪಾತ್ರನಾಗಿದ್ದ.      

(ಎಚ್.ವಿ.ಎಸ್.; ಎನ್.ಎಸ್.ಎಲ್.)

(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ